ಶಿವಾನುಭವ
ಪ್ರಾರ೦ಭ - ಅಕ್ಟೋಬರ್ 13, 1981
ಮಾನವನ ಕಲ್ಯಾಣಕ್ಕೆ ಶಿವಯೋಗಿಗಳು, ಸಂತರು, ಶರಣರು ತಮ್ಮ ದೇಹವನ್ನು ಗಂಧದಕೊರಡಿನಂತೆ ಸವೆಸಿ ಉರಿಯುಂಡ ಕರ್ಪುರದಂತೆ; ತಮ್ಮ ದೇಹ ದಂಡನೆಮಾಡಿ ಮಾನವ ಕಲ್ಯಾಣ ಬಯಸಿದರು. ಮನುಷ್ಯರನ್ನು ಮಾನವರನ್ನಾಗಿ ಅಷ್ಟೆಯಲ್ಲದೆ ದಾನವರನ್ನೂ ಕೂಡ ಮಾನವರನ್ನಾಗಿ ಪರಿವರ್ತಿಸುವ ಶಕ್ತಿ ಮಹಾತ್ಮರಿಗಿದೆ. ಮಹಾತ್ಮರ ವಾಣಿ, ಪುರಾಣ, ಪುಣ್ಯ ಕಥೆಗಳ ಶ್ರವಣದಿಂದ ದಾರಿಕಾಣಬಹುದು. ನರರನ್ನು ಹರನನ್ನಾಗಿ ಪರಿವರ್ತಿಸಬಹುದು. ದೇಹಕ್ಕೆ ಅಂಟಿಕೊಂಡ ಅರಿಷಡ್ವರ್ಗಗಳನ್ನು ಆದುಮಿಡುವ ಹಾಗು ಅವುಗಳ ಬಂಧನದಿಂದ ವಿಮುಕ್ತರಾಗಲು ಶರಣರ, ಸಂತರ ಸಂಗವೇ ಸೂಕ್ತದಾರಿ. ಇದೇ ಉದ್ದೇಶದಿಂದ ಕಲ್ಯಾಣದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದರು. ಕಾಯಕ ಮುಗಿದ ಮೇಲೆ ಎಲ್ಲ ಶರಣರು ಒಂದೆಡೆ ಸೇರಿ ತಮತಮಗೆ ಆದ ಅನುಭವಗಳನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರು. ಇಂತಹ ಅನುಭವದ ಮಂದಿರವೇ ಶಿವಾನುಭವ ಮಂಟಪವಾಯಿತು. ಇದನ್ನೆಲ್ಲ ಅರಿತ ಕಲಿಯುಗದ ಕೊನೆಯಲ್ಲಿ ಕೋಟಿಗೊಬ್ಬ ಶರಣನೆಂದು. ಚಲಿಸುವ ದೇವರೆಂದು. ನಾಡಬೆಳಗಿದ ಶ್ರೀ ಚನ್ನವೀರ ಶರಣರು ಹೊಂಬಳ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದರು. ರಾಜೂರವರ ಮನೆಯಲ್ಲಿ ಡೊಳ್ಳಿನ ಗುರುಗಳು ಸಂಗಣ್ಣನವರು ಹಾಗೂ ಊರಿನ ಎಲ್ಲ ಹಿರಿಯರನ್ನು ಕರೆಸಿ ಮುಂದೆ ಬರುವ ಸೀಗೆ ಹುಣ್ಣಿಮೆಯಂದು ಬಳಗಾನೂರಲ್ಲಿ ರಾತ್ರಿ ಶಿವಾನುಭವ ಕಾರ್ಯಕ್ರಮ ಪ್ರಾರಂಭಿಸಲು ತೀರ್ಮಾನಿಸಿದರು.
ಶಿವಾನುಭವ ಕಾರ್ಯಕ್ರಮ ಮುಗಿದ ನಂತರ ಜೋಳದ ನುಚ್ಚು ಮತ್ತು ಸಾರಾ ಮಾಡಲು ನಿರ್ಧರಿಸಿದರು. ಯಾವದೇ ಕಾರಣಕ್ಕೂ ಪ್ರಸಾದದಲ್ಲಿ ಬದಲಾವಣೆ ಮಾಡಬಾರದೆಂದು ಕಟ್ಟೆಚ್ಚರ ಕೊಟ್ಟರು. ಮೊದಲನೆಯ ಸೀಗಿಹುಣ್ಣಿಮೆ ತಾರೀಖ: ೧೩-೧೦-೧೯೮೧ ರಂದು ಬಂದಿತ್ತು. ಪೂಜ್ಯ ಶರಣರು ಹೊಂಬಳದಲ್ಲಿದ್ದರು. ಶಿವಾನುಭವದಂದು ಪ್ರಸಾದದ ನುಚ್ಚಿಗಾಗಿ ಜೋಳ ಬೇಕಾಗಿತ್ತು. ಅಲ್ಲಿಯೇ ನಿಂತಿದ್ದ ರಾಜೂರ ನೀಲಕಂಠಪ್ಪನವರು ನಮ್ಮ ಮನೆಯಲ್ಲಿದ್ದ ఒందు జల జాగళ ತೆಗೆದುಕೊಂಡು - ನುಚ್ಚು ಹಾಕಿಸಿಕೊಂಡು ಬರುತ್ತೇವೆಂದು ಹೇಳಿದರು. ಆದರೆ ಶರಣರು ಒಪ್ಪಲಿಲ್ಲ. ಭರಮಪ್ಪನನ್ನು ಕರೆದುಕೊಂಡು ಓಣಿಯಲ್ಲಿ ಹೋಗಿರಿ. ಇಲ್ಲಿಂದ ಮೈಲಾರದವರ ಮನೆಯವರೆಗೆ ಪ್ರತಿಯೊಬ್ಬರ ಮನೆಯಿಂದ ಜೋಳದ ಭಿಕ್ಷೆಯನ್ನು ಹಾಕಿಸಿಕೊಂಡು ಬನ್ನಿರೆಂದು ಕಳಿಸಿದರು. ಅಪ್ಪನ ಆಜ್ಞೆ ಪ್ರಕಾರ ಹೋಗಿ ಬರಲಾಗಿ ಅರ್ಥ ಚೀಲ ಜೋಳ ಬಂದವು. ಶರಣರ ಅಪ್ಪಣೆಯಂತೆ ನುಚ್ಚು ಒಡೆಸಿಕೊಂಡು ಬಂದರು. ಮರುದಿನ (ಹುಣ್ಣಿಮೆ) ನುಚ್ಚು ತಯಾರಿಸಲು ಹಂಡೆ, ಕೊಳಗವನ್ನು ತೆಗೆದುಕೊಂಡು ಕನಾಜ ಸಂಗಣ್ಣನವರನ್ನು ಕರೆದುಕೊಂಡು ಸಾರಿನ ಸಾಮಾನು ತೆಗೆದುಕೊಂಡು ಹೋದರು.
ಮಠದ ಮುಂದಿನ ಹೊಲದಲ್ಲಿ ಒಲೆ ಹೂಡಿ ಪ್ರಸಾದ ತಯಾರ ಮಾಡಿದರು. ಹೊತ್ತುಮುಳುಗುವ ಸಮಯಕ್ಕೆ ಸರಿಯಾಗಿ ಶರಣರು ಪಾಹಿಮಾಮ ಗವಿಯಸಿದ್ದ, ಪಾಹಿಮಾಮ ಗವಿಯಸಿದ್ದ ಎಂದು ಭಜನೆ ಮಾಡುತ್ತ ಬರಲು ಅವರೊಂದಿಗೆ ಹೊಂಬಳದ ಶಂಕರಲಿಂಗ ಭಜನಾ ಮಂಡಳಿಯವರು ಭಜನೆ ಮಾಡುತ್ತ ವೇದಿಕೆಗೆ ಬಂದರು. ಕಂಬಳಿ ಗುರುಗಳು ಕಾರ್ಯಕ್ರಮ ನಡೆಸಿಕೊಟ್ಟರು. ಆಗಮಿಸಿದ ಹರಗುರು ಚರಮೂರ್ತಿಗಳು ಆಶೀರ್ವಚನ ನೀಡಿದರು. ನಂತರ ಮೌನ ತಪಸ್ವಿ ಶ್ರೀ ಚನ್ನವೀರ ಶರಣರು ಆಶೀರ್ವಚನ ಮಾಡಿ ಬಂದವರೆಲ್ಲ ಪ್ರಸಾದ ಸ್ವೀಕರಿಸಲು ಅಪ್ಪಣೆ ಮಾಡಿ ಪೂಜೆಗೆ ತೆರಳಿದರು.
ಹೀಗೆ ಪ್ರಾರಂಭವಾದ ಶಿವಾನುಭವ ಈ ವರೆಗೆ ೩೬೦ ಕಾರ್ಯಕ್ರಮಗಳನ್ನು ಪೂರೈಸಿ ಮುನ್ನಡೆದಿದೆ. ಪೂಜ್ಯ ಶರಣರ ಸಮ್ಮುಖದಲ್ಲಿ ಧಾರವಾಡದ ಮಹಾಂತಪ್ಪಗಳು, ಗೋಕಾಕದ ಶಿವಲಿಂಗೇಶ್ವರ ಸ್ವಾಮಿಗಳು, ಕೊಪ್ಪಳ ಗವಿಮಠದ ಶಿವಶಾಂತವೀರ ಸ್ವಾಮಿಗಳು, ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರುಗಳು, ಗದಗಿನ ತೋಂಟದಾರ್ಯರು, ಮುಳಗುಂದ ಬಾಲಲೀಲಾ ಮಹಾಂತಸ್ವಾಮಿಗಳು, ಕಲಬುರ್ಗಿಯ ಶರಣಬಸಪ್ಪಾ ಅಪ್ಪಾ ಅವರು, ಹಾಳಕೇರಿ ಅಜ್ಜನವರು, ಮುಂಡರಗಿಯ ಅನ್ನದಾನೀಶ್ವರ ಮಹಾಸ್ವಾಮಿಗಳು, ಉಜ್ಜಯಿನಿ, ಕಾಶಿ, ಶ್ರೀಶೈಲ, ಬಾಳೆಹೊನ್ನೂರ ಗಳ ಜಗದ್ಗುರುಗಳು, ಗುಡದೂರ ತಾತನವರು ಹೀಗೆ ಅನೇಕ ಹರಗುರು ಚರಮೂರ್ತಿಗಳು ಹುಣ್ಣಿಮೆಯ ಶಿವಾನುಭವಕ್ಕೆ ಆಗಮಿಸಿ ಭಕ್ತರಿಗೆ ದರ್ಶನ, ಆಶೀರ್ವಾದ ಕರುಣಿಸಲು ಶ್ರೀ ಶರಣರು ಅವಕಾಶಮಾಡಿಕೊಟ್ಟರು, ಶರಣರು ಮರೆಯಾದ ನಂತರ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಮುನ್ನಡೆಸಿಕೊಂಡು ಬಂದಿದ್ದಾರೆ. ಶರಣರಿದ್ದಾಗ್ಗೆ ಶಿವಾನುಭವ ಕಾರ್ಯಕ್ರಮ ಎಷ್ಟೊತ್ತಿಗೆ ಮುಗಿಯುತ್ತದೆಂಬುದನ್ನು ಹೇಳಲಾಗುತ್ತಿದ್ದಿಲ್ಲ. ಮಠದ ಆವರಣದಲ್ಲಿ ಎಣಿಸಲು ಬಾರದಷ್ಟು ವಾಹನಗಳು ಬರುತ್ತಿದ್ದವು. ರೈಲಿಗೆ ಬರುವ ಜನರ ಸಂಖೆಗೇನು ಕಡಿಮೆ ಇರುತ್ತಿದ್ದಿಲ್ಲ. ರೈಲು ಬೋಗಿಯಮೇಲೆ ಕುಳಿತು ಜನ ಬರುತ್ತಿತ್ತು. ಬಂದ ಭಕ್ತರ ಚಿತ್ತ ಶರಣರ ಆಗಮನದ ಕಡೆಗೆ ಇರುತ್ತಿತ್ತು. ಶರಣರ ದರ್ಶನವಾದರೆ ತಮ್ಮ ಪಾಪವೆಲ್ಲ ಪರಿಹಾರವೆಂಬ ಭಾವ ಭಕ್ತರಲ್ಲಿ ಮನೆಮಾಡಿತ್ತು.
ಧಾರ್ಮಿಕ ದತ್ತಿ ಉಪನ್ಯಾಸ
ಪ್ರಾರ೦ಭ - 2018
ಉದ್ಯೋಗ ಮೇಳ
ಪ್ರಾರ೦ಭ - 2018
ಪರಿಸರ ಸಂರಕ್ಷಣೆ
ಪ್ರಾರ೦ಭ - 2015
ಪ್ರತಿಭಾ ಪುರಸ್ಕಾರ
ಪ್ರಾರ೦ಭ - 2009
ಭಾವನಾತ್ಮಕ ಐಕ್ಯತೆ ಮತ್ತು ಕೋಮು ಸಾಮರಸ್ಯ
ವ್ಯಸನ ಮುಕ್ತ ಸಮಾಜಕ್ಕಾಗಿ ಸದ್ಭಾವನ ಪಾದಯಾತ್ರೆ
ಪ್ರಾರ೦ಭ - 2013
ಬಡಮಕ್ಕಳ ಶಿಕ್ಷಣ ದತ್ತು ಸ್ವೀಕಾರ
ಪ್ರಾರ೦ಭ - 2018
ಅಕ್ಷರಭ್ಯಾಸ ಪ್ರಾರಂಭೋತ್ಸವ
ಪ್ರಾರ೦ಭ - 2016